ಎಡಿನ್‍ಬರೊ ಡ್ಯೂಕ್ (ಫಿಲಿಪ್ ಮೌಂಟ್‍ಬ್ಯಾಟನ್)
	ಜ. 1921. ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತರಾಜ್ಯದ ರಾಣಿಯಾದ ಎರಡನೆಯ ಎಲಿಜóಬೆತಳ ಪತಿ, ರಾಜಕುಮಾರ ಫಿಲಿಫ್. ಜನನ : 10ನೆಯ ಜೂನ್ 1921. ಗ್ರೀಸಿನ ರಾಜಕುಮಾರ ಆಂಡ್ರೂ ಮತ್ತು ರಾಜಕುಮಾರಿ ಆಲಿಸರ ಒಬ್ಬನೇ ಮಗ; ಇವರಿಗೆ ಹುಟ್ಟಿದ ಮಕ್ಕಳ ಪೈಕಿ ಕಿರಿಯ. ವಾವೆಯಲ್ಲಿ ಬ್ರಿಟನ್ನಿನ ವಿಕ್ಟೋರಿಯ ರಾಣಿಯ ಮರಿಮಗಳ ಮಗ; ಎರಡನೆಯ ಎಲಿಜûಬೆತಳಿಗೆ ಮೂರು ತಲೆ ಹಿಂದಿನ ಸೋದರ ಸಂಬಂಧ. ಈ ಮನೆತನದ ವಿವಾಹ ಸಂಬಂಧಗಳು ಬೇರೆ ಬೇರೆ ಮನೆತನಗಳೊಡನೆ ಬೆಳೆದು ಬಂದಿದ್ದರ ಪರಿಣಾಮವಾಗಿ ಫಿಲಿಪನಲ್ಲಿ ಗ್ರೀಕ್ ರಕ್ತ ಹರಿಯುತ್ತಿಲ್ಲ. ಗ್ರೀಕ್ ಭಾಷೆಯೂ ಈತನಿಗೆ ಬಾರದು. ಈತ ಹುಟ್ಟಿದಾಗ ಗ್ರೀಸ್ ರಾಜಮನೆತನಕ್ಕೆ ದುರ್ದೆಶೆ ಬಂದಿತ್ತು; ಅದು ಮಸುಳಿತ್ತು. ಆದ್ದರಿಂದ ಫಿಲಿಪನ ಲಾಲನೆ, ಪಾಲನೆ ಶಿಕ್ಷಣಗಳು ವಿದೇಶಗಳಲ್ಲಿಯೇ ನಡೆದುವು. ಈತನನ್ನು ಇಂಗ್ಲೆಂಡಿಗೆ ಕರೆತಂದಾಗ ಈತನಿಗೆ ಎಂಟು ವರ್ಷ. ಚಿಕ್ಕಪ್ಪ ಆರ್ಲ್ ಮೌಂಟ್‍ಬ್ಯಾಟನ್ (ಬರ್ಮ) ಅವರ ಮನೆಯಲ್ಲೇ ಫಿಲಿಪ್ ಬೆಳೆದದ್ದು. ಚಿಯಾಮ್, ಸರ್ರಿ ಮತ್ತು ಗೋರ್ಡನ್‍ಸ್ಟೌನ್‍ಗಳಲ್ಲಿ ಫಿಲಿಪನ ಶಿಕ್ಷಣ ನಡೆಯಿತು. ಡಾರ್ಟ್‍ಮತ್‍ನಲ್ಲಿರುವ ರಾಯಲ್ ನೇವಲ್ ಕಾಲೇಜಿಗೆ ಸೇರಿದಾಗ ಇವನಿಗೆ 18 ವರ್ಷ ವಯಸ್ಸಾಗಿತ್ತು. 1910ರ ಜನವರಿಯಿಂದ ಎರಡನೆಯ ವಿಶ್ವಯುದ್ಧದ ಕೊನೆಯವರೆಗೆ ಪ್ರಾಚ್ಯ ಪ್ರದೇಶಗಳಲ್ಲೂ ಪೆಸಿಫಿಕ್ ಯುದ್ಧ, ಸಿಸಿಲಿ ಆಕ್ರಮಣ ಮತ್ತು ಮ್ಯಾಟಪಾನ್ ಭೂಶಿರದ ಬಳಿಯ ತೀವ್ರ ಸೈನಿಕ ಕಾರ್ಯಾಚರಣೆಗಳಲ್ಲೂ ಫಿಲಿಪ್ ಪಾಲ್ಗೊಂಡಿದ್ದ. ಗ್ರೀಕ್ ಸಿಂಹಾಸನಕ್ಕೆ ಹಕ್ಕುದಾರಿಕೆಯ ಶ್ರೇಣಿಯಲ್ಲಿ ಐದನೆಯವನಾಗಿದ್ದ ಈತ 1947ರ ಫೆಬ್ರವರಿ 28ರಂದು ಈ ಹಕ್ಕುದಾರಿಕೆಯನ್ನು ಬಿಟ್ಟುಕೊಟ್ಟು ತನ್ನ ತಾಯಿಯ ಮೌಂಟ್‍ಬ್ಯಾಟನ್ ಎಂಬ ವಂಶನಾಮ ತಳೆದು ಬ್ರಿಟಿಷ್ ಪೌರತ್ವಪಡೆದುಕೊಂಡ. 1947ರ ಜುಲೈ 9ರಂದು ಈತನಿಗೂ ರಾಜಕುಮಾರಿ ಎಲಿಜûಬೆತಳಿಗೂ ವಿವಾಹದ ನಿಶ್ಚಿತಾರ್ಥ ಘೋಷಿಸಲಾಯಿತು. 1947ರ ನವೆಂಬರ್ 20ರಂದು ವೆಸ್ಟ್‍ಮಿನ್ಸ್‍ಟರ್ ಅಬೆಯಲ್ಲಿ ಇವರಿಬ್ಬರ ವಿವಾಹ ನಡೆಯಿತು. ಇದಕ್ಕೆ ಮುಂಚೆ, ಅಂದರೆ 1947ರ ನವೆಂಬರ್ 19ರಂದು, ಇವರಿಗೆ ಬ್ಯಾರನ್ ಗ್ರಿನಿಜ್ ಮೆರಿಯೊನೆತ್ ಅರ್ಲ್ ಮತ್ತು ಎಡಿನ್‍ಬರೊ ಡ್ಯೂಕ್ ಎಂಬ ಬಿರುದುಗಳನ್ನಿತ್ತು, ರಾಜಮನೆತನಕ್ಕೆ ತಕ್ಕ ಗೌರವ ಸಲ್ಲಿಸಲಾಯಿತು.

	ವಿವಾಹಾನಂತರವೂ ರಾಯಲ್ ನೇವಿಯಲ್ಲಿ ಫಿಲಿಪ್ ತನ್ನ ಸೇವೆಯನ್ನು ಮುಂದುವರಿಸಿದ. ಈತನ ನೇತೃತ್ವದಲ್ಲಿದ್ದ ಮ್ಯಾಗ್‍ಪೈ ಯುದ್ಧನೌಕೆ ಮೆಡಿಟರೇನಿಯನ್ ಸಾಗರದಲ್ಲಿ ಕಾರ್ಯನಿರತವಾಗಿತ್ತು. ಆರನೆಯ ಜಾರ್ಜ್ ದೊರೆಯ ಸೂಚನೆಯ ಮೇರೆಗೆ ಈತ 1948ರಲ್ಲಿ ರಾಷ್ಟ್ರೀಯ ಕ್ರೀಡಾಗಾರಗಳ ಸಂಘದ (ನ್ಯಾಷನಲ್ ಪ್ಲೇಯಿಂಗ್ ಫೀಲ್ಡ್ಸ್ ಅಸೋಸಿಯೇಷನ್) ಅಧ್ಯಕ್ಷತೆಯನ್ನೊಪ್ಪಿಕೊಂಡ. ಇದರಿಂದಾಗಿ, ರಾಷ್ಟ್ರದ ಎಲ್ಲ ಭಾಗಗಳಲ್ಲಿಯ ಸ್ಥಳೀಯ ಸ್ಥಿತಿಗತಿ ವ್ಯವಹಾರ ಪ್ರವೃತ್ತಿಗಳ ಪ್ರತ್ಯಕ್ಷ ಪರಿಚಯ ಇವನಿಗೆ ದೊರೆಯಿತು. ವೈe್ಞÁನಿಕ ವಿಷಯಗಳಲ್ಲೂ ತರುಣ ಜನಾಂಗದ ಬಗ್ಗೆಯೂ ಈತ ಅಪಾರ ಆಸಕ್ತಿ ವಹಿಸಿದ. ವಿe್ಞÁನ ಮತ್ತು ತಂತ್ರಶಾಸ್ತ್ರಕ್ಕೆ ಬ್ರಿಟನ್ನಿನ ಕೊಡುಗೆ ಎಂಬ ವಿಷಯದ ಬಗ್ಗೆ 1951ರಲ್ಲಿ ಮಾಡಿದ ಬ್ರಿಟಿಷ್ ಅಸೋಸಿಯೇಷನ್ನಿನ ಅಧ್ಯಕ್ಷ ಭಾಷಣದಲ್ಲಿ ಈತನ ವೈe್ಞÁನಿಕ ಮತ್ತು ವ್ಯಾವಹಾರಿಕ ಒಲವು ವ್ಯಕ್ತವಾಗುತ್ತದೆ. ಬ್ರಿಟನ್ನಿನ ದೊರೆ ಆರನೆಯ ಜಾರ್ಜನ ಅನಾರೋಗ್ಯ ಹೆಚ್ಚುತ್ತ ಬಂದಂತೆ ಆತನ ಪರವಾಗಿ ಫಿಲಿಪ್ ಮತ್ತು ಎಲಿಜûಬೆತ್ ಸಾರ್ವಜನಿಕ ಸಮಾರಂಭಗಳಲ್ಲಿ ಹೆಚ್ಚುಹೆಚ್ಚಾಗಿ ಭಾಗವಹಿಸಬೇಕಾಗಿ ಬಂತು. 1952ರಲ್ಲಿ ಇವರು ಕಾಮನ್‍ವೆಲ್ತ್ ರಾಷ್ಟ್ರಗಳ ಪ್ರವಾಸದ ಮೊದಲ ಹಂತದಲ್ಲಿದ್ದಾಗ ಜಾರ್ಜ್ ದೊರೆಯ ಸಾವಿನ ಸುದ್ದಿ ಮುಟ್ಟಿತು. 1952ರ ಫೆಬ್ರುವರಿ 6ರಂದು ಎಲಿಜûಬೆತ್ ಗದ್ದುಗೆಯನ್ನೇರಿದಾಗ ಆಕೆಯ ಅಧಿಕೃತ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿ ಬಂದದ್ದರಿಂದಲೂ ಕಾಮನ್‍ವೆಲ್ತ್ ಮತ್ತು ಇತರ ದೇಶಗಳ ಪ್ರವಾಸದಲ್ಲಿ ಆಕೆಯ ಒಡನಾಡಿಯಾಗಿರಬೇಕಾಗಿದ್ದುದರಿಂದಲೂ ನೌಕಾದಳದ ಹುದ್ದೆಯನ್ನು ಈತ ಬಿಟ್ಟು ಕೊಡಬೇಕಾಯಿತು. 1950-52ರಲ್ಲಿ ಈತ ಬ್ರಿಟಿಷ್ ಅಸೋಸಿಯೇಷನ್ನಿನ ಅಧ್ಯಕ್ಷನಾಗಿದ್ದ. 1953ರಲ್ಲಿ ಎಡ್‍ನ್‍ಬರೊ ವಿಶ್ವವಿದ್ಯಾನಿಲಯದ ಕುಲಪತಿಯಾದ. ತರುಣರ ಸೃಜನಾತ್ಮಕ ಸಾಧನೆಗೆ ಪ್ರೋತ್ಸಾಹ ನೀಡುವ ಸಲುವಾಗಿ 1956ರಲ್ಲಿ ಎಡ್‍ನ್‍ಬರೊ ಡ್ಯೂಕ್ ಬಹುಮಾನ ಯೋಜನೆ ಜಾರಿಗೆ ಬಂತು. 1956-57ರ ಶಿಶಿರದಲ್ಲಿ ಡ್ಯೂಕ್ ಪ್ರಮುಖ ವಿಶ್ವಪ್ರವಾಸ ಕೈಗೊಂಡಿದ್ದ. ಈ ಪ್ರವಾಸಾನಂತರ 1957ರಲ್ಲಿ ಈತನಿಗೆ ಇಂಗ್ಲೆಂಡಿನ ರಾಜಕುಮಾರ (ಪ್ರಿನ್ಸ್) ಎಂಬ ಅಭಿದಾನವನ್ನಿತ್ತು ಗೌರವಿಸಲಾಯಿತು. ಈತನ ಎರಡನೆಯ ವಿಶ್ವಯಾತ್ರೆ 1959ರಲ್ಲಿ ಬೆಳೆಯಿತು.

	ಆಕ್ಸ್‍ಫರ್ಡಿನಲ್ಲಿ 1956ರಲ್ಲಿ ಈತ ಔದ್ಯೋಗಿಕ ಕ್ಷೇತ್ರದ ಮಾನವೀಯ ಸಮಸ್ಯೆಗಳನ್ನು ಕುರಿತ ಸಮ್ಮೇಳನವೊಂದನ್ನು ವ್ಯವಸ್ಥೆಗೊಳಿಸಿದ. ಉದ್ಯೋಗ ಮತ್ತು ರಾಷ್ಟ್ರೀಯ ಸಾಮಥ್ರ್ಯದ ಬಗ್ಗೆ ಈತನಿಗೆ ತುಂಬ ಕಳಿಕಳಿಯುಂಟೆಂಬುದಕ್ಕೆ ಇದು ದ್ಯೋತಕ. ಎಲ್ಲ ಕಾಮನ್‍ವೆಲ್ತ್ ರಾಷ್ಟ್ರಗಳ ಔದ್ಯೋಗಿಕ ಕ್ಷೇತ್ರಗಳ ಆಡಳಿತ ಮಂಡಳಿಗಳ ಮತ್ತು ಕಾರ್ಮಿಕವರ್ಗಗಳ ಪ್ರತಿನಿಧಿಗಳನ್ನು ಆ ಸಮ್ಮೇಳನಕ್ಕೆ ಆಹ್ವಾನಿಸಲಾಗಿತ್ತು. ಈತ 1957ರಲ್ಲಿ ಮೆಲ್‍ಬೋರ್ನ್‍ನಲ್ಲಿ ನಡೆದ ಒಲಂಪಿಕ್ ಕ್ರೀಡಾಕೂಟವನ್ನು ಉದ್ಘಾಟಿಸಿದ. ತನ್ನ ಕಾರ್ಯಭಾರಗಳ ಸಂಪ್ರದಾಯದ ವಿಚಾರದಲ್ಲಿ ಈತ ತೋರುತ್ತಿದ್ದ ಸ್ವತಂತ್ರ ಸರಳ ಧೋರಣೆ ಹಲವು ಸಂಪ್ರದಾಯವಾದಿಗಳ ಟೀಕೆಗೊಳಗಾಯಿತು. ಜನಪ್ರಿಯ ಪತ್ರಿಕೆಗಳ ಅಸಮಾಧಾನವನ್ನೂ ಎದುರಿಸಬೇಕಾಗಿ ಬಂತು. ಆ ಪತ್ರಿಕೆಗಳ ಒಡೆಯರು ಈತನ ವಿದೇಶೀ ಸಂಬಂಧವನ್ನು ಒತ್ತಿ ಹೇಳತೊಡಗಿದ್ದರು. 1960ರಲ್ಲಿ ರಾಣಿ ಎಲಿಜûಬತ್ ತನ್ನ ವಂಶನಾಮದೊಂದಿಗೆ ಮೌಂಟ್‍ಬ್ಯಾಟನ್ ಶಬ್ದವನ್ನು ಸೇರಿಸಿಕೊಳ್ಳುವ ವೈಯಕ್ತಿಕ ತೀರ್ಮಾನವನ್ನು ಕೈಗೊಂಡಾಗ ಜನತೆ ಆ ತೀರ್ಮಾನವನ್ನು ಉತ್ಸಾಹದಿಂದ ಸ್ವಾಗತಿಸಿದ್ದೇ ಫಿಲಿಪನ ರಾಷ್ಟ್ರವ್ಯಾಪ್ತಿ ಜನಪ್ರಿಯತೆಯ ದ್ಯೋತಕ. ಸ್ನೇಹಪರತೆ ಮತ್ತು ಅನೌಪಚಾರಿಕ ನಡವಳಿಕೆಗಳಿಂದ ಈತ ಇಷ್ಟೊಂದು ಲೋಕಪ್ರಿಯನಾಗಿದ್ದಾನೆ.

	ಎಡಿನ್‍ಬರೊ ಡ್ಯೂಕನ ಭಾಷಣಗಳ ಎರಡು ಸಂಪುಟಗಳು ಕ್ರಮಶಃ 1957 ಮತ್ತು 1960ರಲ್ಲಿ ಬೆಳಕು ಕಂಡಿವೆ. ಈತ ಬರೆದ ಒಂದು ಗ್ರಂಥದ ಹೆಸರು ಬಡ್ರ್ಸ್‍ಫ್ರಮ್ ಬ್ರಿಟಾನಿಕ (1962).

	ರಾಜಕುಮಾರ ಚಾಲ್ರ್ಸ್ ಫಿಲಿಪ್ ಆರ್ಥರ್ ಜಾರ್ಜ್ ಈತನ ಮೊದಲ ಮಗ (ಜನನ : 14 ನವೆಂಬರ್ 1948). 1952ರಲ್ಲಿ ಎಲಿಜûಬೆತ್ ಸಿಂಹಾಸನವೇರಿದಾಗ ಆತನಿಗೆ ಕಾರ್ನ್‍ವಾಲನ ಡ್ಯೂಕ್ ಪದವಿ ದೊರೆಯಿತು. ಈತ ಆತ ವೇಲ್ಸಿನ ರಾಜಕುಮಾರನಾಗಿದ್ದಾನೆ (ಪ್ರಿನ್ಸ್ ಆಫ್ ವೇಲ್ಸ್). ರಾಜಕುಮಾರಿ ಆನ್ ಎಲಿಜûಬೆತ್ ಆಲಿಸ್ ಲೂಸಿ ಎರಡನೆಯ ಮಗಳು (ಜನನ : 15 ಆಗಸ್ಟ್ 1950). 									
	 (ಪಿ.ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ